ಒಬ್ಬನನ್ನು ಬಂಧನದಲ್ಲಿಟ್ಟಿರುವುದು ನ್ಯಾಯ ವಿಹಿತವೊ ಅಲ್ಲವೊ ಎಂಬುದನ್ನು ವಿಚಾರಣೆ ಮಾಡುವುದಕ್ಕಾಗಿ ನ್ಯಾಯಾಧಿಪತಿಯ ಮುಂದೆ ವ್ಯಕ್ತಿಯನ್ನು ಸಾಕ್ಷಾತ್ತಾಗಿ ಹಾಜರು ಮಾಡಬೇಕೆಂದು ಕೊಟ್ಟ ಆಜ್ಞೆ (ಹೇಬಿಯಸ್ ಕಾರ್ಪಸ್). ನೀವು ಈ ದೇಹ ಪಡೆಯಬಹುದು-ಎಂಬುದು ಹೇಬಿಯಸ್ ಕಾರ್ಪಸ್ನ ಅರ್ಥ. ವ್ಯಕ್ತಿಯನ್ನು ಬಂಧನದಲ್ಲಿಟ್ಟಿರುವವನಿಗೆ ನ್ಯಾಯಾಧೀಶ ಈ ಆಜ್ಞೆ ನೀಡುತ್ತಾನೆ. ಅಕ್ರಮವಾಗಿ ಬಂಧಿಸಿ, ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸದೆ ನ್ಯಾಯಬಾಹಿರವಾಗಿ ಸೆರೆಯಲ್ಲಿಟ್ಟಿರುವುದಕ್ಕೆ ಇದು ಪರಿಹಾರಕ್ರಮ. ಇದು ಒಂದು ಹಕ್ಕು. ನ್ಯಾಯಬಾಹಿರ ಬಂಧನವೆನಿಸಬಹುದಾದ ಸಂದರ್ಭದ ವಿವರಗಳನ್ನೊಳಗೊಂಡು ಪ್ರಮಾಣಪುರ್ವಕವಾದ ಹೇಳಿಕೆಯೊಂದಿಗೆ ಉಚ್ಚನ್ಯಾಯಾಲಯಕ್ಕೋ ಅದರ ನ್ಯಾಯಮೂರ್ತಿಗೋ ಅರ್ಜಿ ಸಲ್ಲಿಸಿದಾಗ ಮಾತ್ರವೇ ಈ ಆಜ್ಞೆ ನೀಡಲಾಗುತ್ತದೆ. ಬಂಧನದಲ್ಲಿರುವವನನ್ನು ಒಂದು ನಿರ್ದಿಷ್ಟ ಕಾಲಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದೂ ಆತನ ಬಂಧನದ ದಿನ ಹಾಗೂ ಕಾರಣ ತಿಳಿಸಬೇಕೆಂದೂ ಈ ಆಜ್ಞೆ ತಿಳಿಸುತ್ತದೆ. ವ್ಯಕ್ತಿಯ ಬಂಧನಕ್ಕೆ ಸಂಬಂಧಿಸಿದಂತೆ ಆತನ ವಿಚಾರವಾಗಿ ನ್ಯಾಯಾಲಯ ನೀಡುವ ತೀರ್ಪಿಗೆ ಬದ್ಧವಾಗಿರಬೇಕೆಂದೂ ಸಂಬಂಧಪಟ್ಟವರು ಅದನ್ನು ಸ್ವೀಕರಿಸಬೇಕೆಂದೂ ಈ ಆಜ್ಞೆಯಲ್ಲಿ ಸೂಚಿಸಿರುತ್ತದೆ. 

ಇಂಗ್ಲೆಂಡಿನಲ್ಲಿ
ಮ್ಯಾಗ್ನಕಾರ್ಟ ಎಂಬ ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದನ್ನು ಇಂಗ್ಲೆಂಡಿನ ಪ್ರಜೆಗಳು ಜಾನ್ ದೊರೆಯಿಂದ ಪಡೆಯುವುದಕ್ಕೆ (1215) ಮುಂಚಿನಿಂದಲೂ ಆ ದೇಶದಲ್ಲಿ ಆಸಾಮಿ ಹಾಜರಿ ಹುಕುಂಗಳನ್ನು ನೀಡುತ್ತಿದ್ದುದುಂಟು. ಅಪರಾಧ ಹೊರಿಸಿ ಕ್ಲೇಶಪಡಿಸುವ ಉದ್ದೇಶದಿಂದ ಬಂದ ಅರ್ಜಿಗಳ ನೆವದಲ್ಲಿ ವ್ಯಕ್ತಿಗಳನ್ನು ಬಂಧನಕ್ಕೊಳಪಡಿಸುವುದನ್ನು ತಪ್ಪಿಸಲು 12ನೆಯ ಶತಮಾನದಲ್ಲಿಯೇ ಇಂಥ ಆಜ್ಞೆ ಜಾರಿಯಲ್ಲಿತ್ತು. ಮ್ಯಾಗ್ನಕಾರ್ಟದಲ್ಲಿ ಇದನ್ನು ನಿರ್ದಿಷ್ಟವಾಗಿ ವಿಧಿಬದ್ಧಗೊಳಿಸಲಾಯಿತು. ಈ ರಕ್ಷಣೆಯನ್ನು ಉಚಿತವಾಗಿ ನೀಡತಕ್ಕದ್ದು; ಇದನ್ನು ತಿರಸ್ಕರಿಸತಕ್ಕದ್ದಲ್ಲ-ಎಂಬುದಾಗಿ ಅದರಲ್ಲಿ ನಮೂದಿಸಲಾಯಿತು. ಇಂಗ್ಲೆಂಡಿನಲ್ಲಿ ಕಾಯಿದೆ ಇತಿಹಾಸದಲ್ಲಿ ಇದೊಂದು ಮುಖ್ಯವಾದ ಘಟ್ಟ. ಕಾಳಗದಿಂದಲೇ ಒಬ್ಬ ವ್ಯಕ್ತಿ ತನ್ನ ವ್ಯಾಜ್ಯವನ್ನು ತೀರ್ಮಾನಿಸುವ ಬದಲು ನ್ಯಾಯದರ್ಶಿಗಳಿಂದ ಆ ಬಗ್ಗೆ ತೀರ್ಪು ಪಡೆಯುವ ನಾಗರಿಕವಿಧಾನ ಇದರಿಂದ ಸಾಧ್ಯವಾಯಿತು. ತಕ್ಸೀರಿನ ಆಪಾದನೆಗೊಳಪಟ್ಟು ಬಂಧಿಸಲ್ಪಟ್ಟವನ ವಿಚಾರದಲ್ಲಿ ನ್ಯಾಯಾಲಯದಿಂದ ಈ ಆಜ್ಞೆ ಬರುತ್ತಿತ್ತು. ಸಂಬಂಧಪಟ್ಟ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನ ಬಂಧನ ಎಷ್ಟರಮಟ್ಟಿಗೆ ನ್ಯಾಯಸಮ್ಮತ ಎಂಬುದನ್ನು ನ್ಯಾಯಾಲಯ ವಿಚಾರಿಸುತ್ತಿತ್ತು. ವಿಚಾರಣೆಯ ಪರಿಣಾಮವಾಗಿ ಅದು ಬಂಧಿತನನ್ನು ಬಿಡುಗಡೆ ಮಾಡುತ್ತಿತ್ತು; ಇಲ್ಲವೇ ಅವನಿಗೆ ಜಾಮೀನಿನ ಅವಕಾಶ ನೀಡುತ್ತಿತ್ತು; ಅಥವಾ ಕೈದಿಯನ್ನು ಸೆರೆಗೆ ವಾಪಸು ಕಳಿಸುತ್ತಿತ್ತು. ಮೊದಲನೆಯ ಚಾರ್ಲ್ಸ್ ದೊರೆಯ ಕಾಲಕ್ಕೆ ಈ ಆಜ್ಞೆ ಸಂಪುರ್ಣವಾಗಿ ಅಸ್ತಿತ್ವಕ್ಕೆ ಬಂದಿತ್ತು. ಕೆಳ ನ್ಯಾಯಾಲಯಗಳಾಗಲೀ ಸರ್ಕಾರಿ ಅಧಿಕಾರಿಗಳಾಗಲೀ ಯಾರನ್ನೂ ಕಾಯಿದೆಬಾಹಿರವಾಗಿ ಬಂಧಿಸದಂತೆ ತಡೆಗಟ್ಟಲು ಇದು ಯೋಗ್ಯವಿಧಾನವೆಂದು ಪರಿಗಣಿತವಾಯಿತು. 

17ನೆಯ ಶತಮಾನದಲ್ಲಿ ಈ ಆಜ್ಞೆಗಳ ವಿಚಾರವಾಗಿ ಇಂಗ್ಲೆಂಡಿನ ದೊರೆಗೂ ಅಲ್ಲಿನ ಕಾಮನ್ಸ್ ಸಭೆಗೂ ವಿವಾದವೇರ್ಪಟ್ಟಿತ್ತು. ನ್ಯಾಯಾಲಯ ನೀಡುವ ಇಂಥ ಆಜ್ಞೆಗಳನ್ನು ದೊರೆ ತಳ್ಳಿಹಾಕಬಹುದೆಂದು ನ್ಯಾಯಮೂರ್ತಿಗಳು ಒಂದು ಮೊಕದ್ದಮೆಯಲ್ಲಿ ತೀರ್ಪು ನೀಡಿದರು. ಕಾಮನ್ಸ್ ಸಭೆ ಇದಕ್ಕೆ ವ್ಯತಿರಿಕ್ತವಾಗಿ ನಿರ್ಣಯಿಸಿತು. ಕಾಮನ್ಸ್ ಮತ್ತು ಲಾರ್ಡ್ಸ್ ಸಭೆಗಳ ಜಂಟಿ ಅಧಿವೇಶನದಲ್ಲಿ ಪೆಟಿಷನ್ ಆಫ್ ರೈಟ್ಸ್ ಎಂಬ ಪ್ರಜಾಹಕ್ಕು ಘೋಷಣೆ ಅಂಗೀಕೃತವಾಯಿತು. ಅದಕ್ಕೆ ಚಾರ್ಲ್ಸ್ ದೊರೆ ಒಪ್ಪಿಗೆ ನೀಡಬೇಕಾಯಿತು. ದೊರೆಯ ನಿರೂಪವೇ ಇದ್ದಾಗ್ಯೂ ಯಾವ ಸ್ವತಂತ್ರ ವ್ಯಕ್ತಿಯನ್ನೂ ನಿಷ್ಕಾರಣವಾಗಿ ಕೈದುಮಾಡಿ ಸೆರೆಯಲ್ಲಿಟ್ಟಿರಲಾಗದೆಂದು ಅದರಲ್ಲಿ ವಿಧಿಸಲಾಯಿತು.
ಎರಡನೆಯ ಚಾರ್ಲ್ಸ್ ದೊರೆಯ ಕಾಲದಲ್ಲಿ ಈ ಕ್ಷೇತ್ರದಲ್ಲಿ ವ್ಯಕ್ತಿಯ ಈ ಹಕ್ಕಿಗೆ ಇನ್ನೂ ಹೆಚ್ಚು ರಕ್ಷಣೆ ದೊರಕುವಂತಾಯಿತು. ಲಾರ್ಡ್ ಕ್ಲಾರೆಂಡನ್ ಎಂಬುವನು ಕಾಯಿದೆಗೆ ವಿರುದ್ಧವಾಗಿ ಅನೇಕರನ್ನು ಬಂಧನಕ್ಕೆ ಒಳಪಡಿಸಿದ್ದ. ಪ್ರಭಾವಶಾಲಿಗಳ ಪ್ರೇರಣೆಯಿಂದಾದ ಬಂಧನಗಳ ವಿಚಾರದಲ್ಲಿ ನಿಷ್ಪಕ್ಷಪಾತ ವಿಚಾರಣೆ ನಡೆಸಿ ಆಜ್ಞೆ ನೀಡಲು ನ್ಯಾಯಾಧಿಕಾರಿಗಳು ಅನೇಕವೇಳೆ ಹಿಂದೆಗೆಯುತ್ತಿದ್ದರು. ಇಂಥ ಆಜ್ಞೆಯ ಅವಧಿಯ ವಿಚಾರವಾಗಿಯೂ ಇದನ್ನು ನೀಡಬಲ್ಲವರ ಅಧಿಕಾರದ ವಿಚಾರವಾಗಿಯೂ ಸಂದೇಹಕ್ಕೆ ಆಸ್ಪದವಿತ್ತು. ಆದ್ದರಿಂದ 1679ರಲ್ಲಿ ಹೇಬಿಯಸ್ ಕಾರ್ಪಸ್ ಅಧಿನಿಯಮ ಜಾರಿಗೆ ಬಂದಿತು. ಇದರಿಂದ ಮೇಲೆ ಸೂಚಿಸಿದ ಸಂದರ್ಭಗಳಲ್ಲಿ ವ್ಯಕ್ತಿಯ ಹಕ್ಕಿಗೆ ಸಂಪುರ್ಣ ರಕ್ಷಣೆ ದೊರಕುವಂತಾಯಿತು. 

ಸಾಮಾನ್ಯವಾಗಿ ಈ ಹಕ್ಕು ಎಲ್ಲರಿಗೂ ದೊರಕುವುದಾದರೂ ಸಾರ್ವಜನಿಕ ಅಪಾಯದ ಪರಿಸ್ಥಿತಿಗಳಲ್ಲಿ ಈ ಅಧಿನಿಯಮವನ್ನು ವಿಶೇಷ ಕಾನೂನಿನ ಮೂಲಕ ಹಂಗಾಮಿಯಾಗಿ ತಳ್ಳಿಟ್ಟದ್ದೂ ಉಂಟು. 

ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ
ಅಮೆರಿಕದ ಸಂಸ್ಥಾನಗಳ ಸಾಮಾನ್ಯ ವಿಧಿಗಳ ಅಂಗವಾಗಿ ಆಸಾಮಿ ಹಾಜರಿ ವಿಧಿ ಅಲ್ಲಿ ರೂಢಿಗೆ ಬಂದಿತು. ಇಂಗ್ಲೆಂಡಿನಲ್ಲಿ 1679ರಲ್ಲಿ ಜಾರಿಗೆ ಬಂದ ಅಧಿನಿಯಮದಲ್ಲಿ ಸೂಚಿಸಿರುವ ತತ್ತ್ವಗಳನ್ನು ಆಧರಿಸಿಯೇ ಅಮೆರಿಕ ಸಂಯುಕ್ತ ಸರ್ಕಾರವೂ ಸಂಸ್ಥಾನ ಸರ್ಕಾರಗಳೂ ಈ ಸಂಬಂಧವಾದ ಕಾರ್ಯವಿಧಾನವನ್ನು ಸ್ಥಾಪಿಸಿಕೊಂಡವು. ಸಂಯುಕ್ತ ನ್ಯಾಯಾಲಯವಾಗಲೀ ಸಂಸ್ಥಾನ ನ್ಯಾಯಾಲಯವಾಗಲಿ ನೀಡಿದ ಆಜ್ಞೆ ಅದರ ಕ್ಷೇತ್ರಾಧಿಕಾರಕ್ಕೆ ಒಳಪಟ್ಟ ಪ್ರದೇಶದಿಂದಾಚೆಗೆ ಅನ್ವಯಿಸುವುದಿಲ್ಲ. ಸಂಯುಕ್ತ ಸರ್ಕಾರಕ್ಕೆ ಪರಮಾಧಿಕಾರವಿರುವ ಕ್ಷೇತ್ರದಲ್ಲಿ ಈ ಅಧಿಕಾರಕ್ಕೆ ಅನುಗುಣವಾಗಿ ಯಾವ ವ್ಯಕ್ತಿಯಾದರೂ ಬಂಧಿಸಲ್ಪಟ್ಟಿದ್ದರೆ ಸಂಸ್ಥಾನ ಸರ್ಕಾರಗಳು ಅದಕ್ಕೆ ಸಂಬಂಧಿಸಿದಂತೆ ಆಸಾಮಿ ಹಾಜರಿ ಆಜ್ಞೆ ನೀಡತಕ್ಕದ್ದಲ್ಲ. ಸಂಯುಕ್ತ ನ್ಯಾಯಾಲಯವಾದರೂ ಜರೂರಾದ ವಿಶಿಷ್ಟ ಸಂದರ್ಭಗಳಲ್ಲಿ ವಿನಾ ಸಂಸ್ಥಾನ ನ್ಯಾಯಾಲಯಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ. 

ಆಸಾಮಿ ಹಾಜರಿ ಆಜ್ಞೆಯನ್ನು ಬೇಡಿ ಬಂದ ಅರ್ಜಿಯನ್ನು ಸಂಸ್ಥಾನ ನ್ಯಾಯಾಲಯ ತಿರಸ್ಕರಿಸಿದಾಗ ಒಬ್ಬ ವ್ಯಕ್ತಿ ಸಂಯುಕ್ತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದೆ ಎಂಬ ವಿಚಾರವಾಗಿ ವಿವಿಧ ಸಂಸ್ಥಾನಗಳ ಅಭಿಪ್ರಾಯಗಳು ಭಿನ್ನವಾಗಿವೆ. ಸಂಯುಕ್ತ ನ್ಯಾಯಾಲಯಕ್ಕೆ ಅಪೀಲು ವಿಚಾರಣೆಯ ಅಧಿಕಾರವ್ಯಾಪ್ತಿಯಿರುವುದರಿಂದ, ಕೆಳ ನ್ಯಾಯಾಲಯದ ಆಜ್ಞೆಗೆ ಅನುಸಾರವಾಗಿ ನಡೆದಿರುವ ಬಂಧನ ಆ ನ್ಯಾಯಾಲಯದ ಅಧಿಕಾರವ್ಯಾಪ್ತಿಯೊಳಕ್ಕೆ ಸೇರಿದ್ದೇ ಅಥವಾ ಅದು ತನ್ನ ಎಲ್ಲೆ ಮೀರಿದೆಯೇ ಎಂಬುದನ್ನು ವಿಚಾರಣೆ ನಡೆಸಲು ಸಂಯುಕ್ತ ನ್ಯಾಯಾಲಯ ಆಜ್ಞೆ ನೀಡಬಹುದು.
 
ಭಾರತದಲ್ಲಿ
ಬ್ರಿಟಿಷ್ ಆಳ್ವಿಕೆ ಪ್ರಾರಂಭವಾದ ಬಳಿಕ ಬ್ರಿಟನ್ನಿನ ವರಿಷ್ಠ ನ್ಯಾಯಾಲಯಗಳಿಗೆ ಸಾಮಾನ್ಯ (ಕ್ರೋಡೀಕೃತವಲ್ಲದ) ವಿಧಿಗಳ ಪ್ರಕಾರ ಇದ್ದ ಅಧಿಕಾರ ಚಲಾಯಿಸುವ ಹಕ್ಕು ಭಾರತದ ಮದ್ರಾಸು, ಮುಂಬಯಿ, ಕಲ್ಕತ್ತಗಳ ಉಚ್ಚ ನ್ಯಾಯಾಲಯಗಳಿಗೆ ಪ್ರಾಪ್ತವಾಯಿತು. ಈ ನ್ಯಾಯಾಲಯಗಳು ಬಾದಷಹರಿಂದ ಪಡೆದ ಸನ್ನದಿನಿಂದ ಸ್ಥಾಪಿತವಾದುವು. 1898ರಲ್ಲಿ ಜಾರಿಗೆ ಬಂದ ದಂಡಪ್ರಕ್ರಿಯಾ ಸಂಹಿತೆಯ (ಕ್ರಿಮಿನಲ್ ಪ್ರೊಸೀಜರ್ ಕೋಡ್) 491ನೆಯ ಕಲಮಿನ ಪ್ರಕಾರ ಈ ಅಧಿಕಾರವನ್ನು ಎಲ್ಲ ಉಚ್ಚ ನ್ಯಾಯಾಲಯಗಳಿಗೂ ಕೊಡಲಾಯಿತು. ಅದರ ವ್ಯಾಪ್ತಿಯನ್ನು ಇಡೀ ಮೂಲ ಹಾಗೂ ಅಪೀಲ್ ನ್ಯಾಯಾಧಿಕಾರ ಕ್ಷೇತ್ರಕ್ಕೆ ವಿಸ್ತರಿಸಲಾಯಿತು. 

491ನೆಯ ಕಲಮಿನನ್ವಯ ಕೊಡಲಾಗಿದ್ದ ಅಧಿಕಾರ ಸಾಮಾನ್ಯ ವಿಧಿಗಳ ರೀತ್ಯಾ ದತ್ತವಾದ ಅಧಿಕಾರದಷ್ಟೇ ವ್ಯಾಪಕವಾಗಿರಲಿಲ್ಲ. ಆದರೆ ಸ್ವತಂತ್ರ ಭಾರತದ ಸಂವಿಧಾನದ 32ನೆಯ ಅನುಚ್ಛೇದದಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಹೆಚ್ಚು ಅಧಿಕಾರವಿದೆ. ಬಂಧನಕ್ಕೊಳಗಾದ ಯಾವ ವ್ಯಕ್ತಿಯನ್ನಾದರೂ ತನ್ನ ಮುಂದೆ ಹಾಜರುಪಡಿಸಬೇಕೆಂದು ಈ ನ್ಯಾಯಾಲಯ ಆಜ್ಞೆ ನೀಡಬಹುದು. ಬಂಧನದಲ್ಲಿಟ್ಟ ವ್ಯಕ್ತಿಗಾಗಲಿ ಸಂಸ್ಥೆಗಾಗಲಿ ಅಲ್ಲದೆ ಸರ್ಕಾರಕ್ಕೂ ಆಜ್ಞಾಪಿಸಲು ಇದಕ್ಕೆ ಅಧಿಕಾರವುಂಟು. ಆ ವ್ಯಕ್ತಿಯ ಬಂಧನವು ಕಾಯಿದೆಗೆ ಅನುಗುಣವಾಗಿದೆಯೇ ಇಲ್ಲವೆ ಎಂಬುದನ್ನು ಅದು ಪರಿಶೀಲಿಸಬಹುದು; ಈ ವಿಚಾರದಲ್ಲಿ ಅದು ತನಗೆ ಯುಕ್ತ ಕಂಡಂತೆ ಹುಕುಮು ನೀಡಬಹುದು. ಸಂವಿಧಾನದ 222ನೆಯ ಅನುಚ್ಛೇದದ ಪ್ರಕಾರ ಈ ಅಧಿಕಾರವನ್ನು ಎಲ್ಲ ಉಚ್ಚ ನ್ಯಾಯಾಲಯಗಳಿಗೂ ಕೊಡಲಾಗಿದೆ. 

ಈ ಅಧಿಕಾರ ಚಲಾಯಿಸಬೇಕೆಂದು ವಿನಂತಿಸುವ ಅರ್ಜಿಯನ್ನು ಬಂಧಿತನಲ್ಲಿ ಹಿತಸಂಬಂಧವಿರುವ ಯಾರು ಬೇಕಾದರೂ ಕೊಡಬಹುದು. ಹಿತಸಂಬಂಧವಿಲ್ಲದಿದ್ದರೂ ನ್ಯಾಯಪಾಲನೆಯಲ್ಲಿ ಆಸಕ್ತಿಯಿರುವಂಥವರು ತಮಗೆ ಅಕ್ರಮವೆನಿಸಿದ ಬಂಧನದ ಕಡೆಗೆ ನ್ಯಾಯಾಲಯದ ಲಕ್ಷ್ಯ ಸೆಳೆಯಬಹುದು. 

ಸ್ಥಾನಬದ್ಧತೆಯಲ್ಲಿಡಲ್ಪಟ್ಟವರ ವಿಷಯದಲ್ಲಿ ವಿಶೇಷವಾಗಿ ಈ ಅಧಿಕಾರದ ಆಶ್ರಯ ಪಡೆಯಲಾಗುತ್ತದೆ. ಆದರೆ ವಿಶೇಷ ಸಂದರ್ಭಗಳಲ್ಲಿ, ರಾಷ್ಟ್ರದ ಭದ್ರತೆಗೆ ಧಕ್ಕೆ ಬರುವ ಅಪಾಯವಿದ್ದಾಗ, ನಿವಾರಕ ನಿರೋಧ ಕಾಯಿದೆಯನ್ನು (ನೋಡಿ) ಸರ್ಕಾರ ಜಾರಿಗೆ ತರಬಹುದು. ವಿಚಾರಣೆಯಿಲ್ಲದೆಯೇ ಯಾರನ್ನಾದರೂ ಸ್ಥಾನಬದ್ಧತೆಯಲ್ಲಿಡುವ ಅಧಿಕಾರ ಆಗ ಸರ್ಕಾರಕ್ಕೆ ಇರುತ್ತದೆ. ನಿರೋಧ ಮಾಡುವುದರಲ್ಲಿ ಕಾನೂನಿನ ನಿಯಮಗಳನ್ನು ಪಾಲಿಸಲು ತಪ್ಪಿದರೆ ಮಾತ್ರ ಬಂಧಿತನನ್ನು ಬಿಡುಗಡೆ ಮಾಡಬಹುದು. ಏಕೆಂದರೆ ಯಾವ ಮನುಷ್ಯನ ಸ್ವಾತಂತ್ರ್ಯವನ್ನೇ ಆಗಲಿ ಕಾನೂನಿನಿಂದ ಸ್ಥಾಪಿತವಾದ ಕ್ರಮದಿಂದ ಹೊರತಾಗಿ ಹರಣ ಮಾಡಬಾರದೆಂದು ಸಂವಿಧಾನದ 21ನೆಯ ಪರಿಚ್ಛೇದ ವಿಧಿಸುತ್ತದೆ.

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ